History of Pampa Kannada Koota
Founding Members |
||
---|---|---|
Dr. Sripad Raju |
Dr. Mayannagowda Krishnappa |
Sri. S.N. Prakash |
೧೯೭೧ ರ ಉಗಾದಿಯ ದಿನ, ಮಾರ್ಚ್ ತಿಂಗಳಲ್ಲಿ ನಮ್ಮ ಪಂಪ ಕನ್ನಡ ಕೂಟದ ಉದಯೋತ್ಸವ. ಮಿಷಿಗನ್ನಿನ Ann Arbor ನಗರದಲ್ಲಿ ಸುಮಾರು ೩೦ ಕನ್ನಡ ಕುಟುಂಬಗಳ ಸಮಾವೇಶ. ಮುಂದೆ ಇದರ ಪ್ರಥಮ ಅಧ್ಯಕ್ಷರಾಗಲಿದ್ದ ಡಾ. ಕೆ. ಎಸ್. ಶ್ರೀಪಾದರಾಜು; ಶ್ರೀ ಎಸ್. ಪ್ರಕಾಶ್ (ಭಾವೀ ಕಾರ್ಯದರ್ಶಿ); ಡಾ. ಎಸ್. ಎನ್. ಭಟ್ (ಭಾವೀ ಖಜಾಂಚಿ); ಶ್ರೀಮತಿ ದೀನಾ ಭಟ್; ಶ್ರೀ ಎಂ. ಕೃಷ್ಣಪ್ಪ ಮತ್ತು ಶ್ರೀಮತಿ ನಳಿನಿ ಕೃಷ್ಣಪ್ಪ; ಡಾ. ಧನ್ವಂತರಿ ಮತ್ತು ಶ್ರೀಮತಿ ಶೀಲಾ ಧನ್ವಂತರಿ; ಶ್ರೀ ನಾಗ ಮನೋಹರ್ ಮತ್ತು ಶ್ರೀಮತಿ ಲೋಕೇಶ್ವರಿ ನಾಗ ಮನೋಹರ್; ಡಾ. ಪದ್ಮನಾಭ ಜೈನಿ ಮತ್ತು ಶ್ರೀಮತಿ ಶಶಿ ಜೈನಿ; ಡಾ. ಎಂ. ನಾಗರಾಜು ಮತ್ತು ಶ್ರೀಮತಿ ರೇಣುಕಾ ನಾಗರಾಜು; ಶ್ರೀ ಎಂ. ಹನುಮಂತಯ್ಯ ಮತ್ತು ಶ್ರೀಮತಿ ಲಲಿತ ಹನುಮಂತಯ್ಯ; ಡಾ. ಉರವಕೊಂಡ ಗಣೇಶ್ ಮತ್ತು ಶ್ರೀಮತಿ ದಾಕ್ಷಾಯಿಣಿ; ಡಾ. ಗಣೇಶ್ ಅವರ ತಾಯಿ; ಡಾ. ಸತ್ಯನಾರಾಯಣ ಮತ್ತು ಶ್ರೀಮತಿ ಕಮಲಾ ಸತ್ಯನಾರಾಯಣ; ಡಾ. ಪರಮೇಶ್ವರಪ್ಪ ಮತ್ತು ಶ್ರೀಮತಿ ಗೀತಾ ಪರಮೇಶ್ವರಪ್ಪ; ಶ್ರೀ ಮುದ್ದಪ್ಪ ಮತ್ತು ಶ್ರೀಮತಿ ದಮಯಂತಿ ಮುದ್ದಪ್ಪ; ಡಾ. ಹಿರೇಮಠ ಮತ್ತು ಶ್ರೀಮತಿ ಯಶೋದಾ ಹಿರೇಮಠ; ಮತ್ತೂ ಇನ್ನೂ ಅನೇಕ ಕನ್ನಡ ಅಭಿಮಾನಿಗಳ ಒತ್ತಾಸೆ, ಆದರ, ಆತಿಥ್ಯ, ಶ್ರದ್ಧೆಗಳಿಂದ ಅಮೆರಿಕೆಯ ಮೊದಲ ಕನ್ನಡ ಕೂಟ ಬೇರೂರಿತು. ಕನ್ನಡತನ, ಸಾಹಿತ್ಯ-ಕಲಾಭಿಮಾನಗಳಿಂದ ಕೂಡಿದ ಕನ್ನಡ ಪ್ರೇಮಿಗಳು ಶಿಕಾಗೋ, ನ್ಯೂಯಾರ್ಕ್, ಬಾಲ್ಟಿಮೋರ್, ಬಫೆಲೋ ಮತ್ತು ಕ್ಯಾಲಿಫೋರ್ನಿಯಾಗಳಿಂದ ಉಜ್ವಲ ಪ್ರೋತ್ಸಾಹದ ಹೊಳೆಯನ್ನೇ ಹರಿಸಿದರು. ಆ ಪ್ರತಿಯೊಬ್ಬರ ಹೆಸರೂ ಕನ್ನಡ ಹೃದಯವಂತಿಕೆಯನ್ನು ಚಿಮ್ಮುವ, ಜೀವನ ಶೋಭೆಯ ವರ್ಣ ರಂಜಿತ ಕಾರಂಜಿಗಳು. ಹಾಲಿನಲ್ಲಿ ಸಕ್ಕರೆ ಬೆರೆತಂತೆ, ತಾವಿರುವ ಸಮುದಾಯ ಜೀವನದಲ್ಲಿ ಹೊಂದಿಕೊಂಡು, “ಇವನಾರವ, ಇವನಾರವ”ನೆಂದೆನಿಸದೆ “ಇವ ನಮ್ಮವ, ಇವ ನಮ್ಮವ” ಎಂದೆನಿಸಿಕೊಂಡು ಸೊಗಸು ಸೌರಭಗಳನ್ನು ಬೀರಿದವರು. ಪಂಪ ಕನ್ನಡ ಕೂಟ ಆರಂಭವಾದ Ann Arbor ನಗರದ ಒಂದು ವಿಶೇಷ ಸಂಗತಿ ಏನೆಂದರೆ ನಮ್ಮೆಲ್ಲರ ಹೆಮ್ಮೆಯ ಕನ್ನಡಿಗರಾದ ಡಾ. ಸುಬ್ಬರಾವ್ ಹಾರ್ಡಿಕರ್ ಮತ್ತು ಶ್ರೀ ತೀ. ನಂ. ಶ್ರೀಕಂಠಯ್ಯನವರು ತಮ್ಮ ಉನ್ನತ ವ್ಯಾಸಂಗಕ್ಕಾಗಿ ಈ ನಗರದ ಮಿಷಿಗನ್ ವಿಶ್ವವಿದ್ಯಾಲಯದಲ್ಲಿ ಇದ್ದು ಅಧ್ಯಯನ ಮಾಡಿದ್ದು. ಡಾ. ಹಾರ್ಡಿಕರ್ ಅವರು ಭಾರತ ಸ್ವಾತಂತ್ರ್ಯ ಆಂದೋಲನದಲ್ಲಿ ಕಾಂಗ್ರೆಸ್ ಸೇವಾದಳ ಎಂಬ ಸಂಸ್ಥೆಯನ್ನು ಸ್ಥಾಪಿಸಿ, ಯುವಕರಲ್ಲಿ ಶಿಸ್ತು, ಸಂಯಮಗಳನ್ನು ಬೆಳೆಸಿದವರು. ತೀ. ನಂ. ಶ್ರೀಕಂಠಯ್ಯನವರು ಹೆಸರಾಂತ ವಿದ್ವಾಂಸರು, ಕವಿಗಳು ಮತ್ತು ಭಾಷಾ ಶಾಸ್ತ್ರ ವಿಶಾರದರು. ನಮ್ಮ ಕನ್ನಡ ಭಾಷೆ-ಸಂಸ್ಕೃತಿ ಸಂಘಟನ ಚಟುವಟಿಕೆಗಳಿಗೆ ಅವರ ಹೆಸರು ಮತ್ತು ಕೊಡುಗೆಗಳು ಹೆಮ್ಮೆಯನ್ನೂ, ಉತ್ತೇಜನವನ್ನೂ ಕೊಟ್ಟವು. ಈ ಮಹನೀಯರಿದ್ದ Ann Arbor ನಗರದಲ್ಲಿಯೇ ಕನ್ನಡ ಸಂಸ್ಥೆಯೊಂದು ಮೊದಲಾಗಿದ್ದು ಅದರ ಸದಸ್ಯರೆಲ್ಲರಿಗೂ ಹರ್ಷದಾಯಕವಾಗಿತ್ತು. ಕನ್ನಡ ಸಂಘ ಸ್ಥಾಪನೆಯ ಪೂರ್ವಾಂಗವಾಗಿ ಅಮೆರಿಕ ಮತ್ತು ಕೆನಡಾ ದೇಶಗಳಲ್ಲಿ ನೆಲೆಸಿದ್ದ ಅನೇಕ ಕನ್ನಡಿಗರ ವಿಳಾಸಗಳನ್ನು ಸಂಗ್ರಹಿಸಿ, ಅವರೆಲ್ಲರಿಗೂ ಕನ್ನಡ ಸಂಸ್ಥೆ ಸ್ಥಾಪನೆಯ ಅಧಿವೇಶನಕ್ಕೆ ಆಹ್ವಾನ ಕಳಿಸಿ, ಅವರಿಂದ ಕನ್ನಡ ಸಂಸ್ಥೆಗೆ ಏನು ನಾಮಕರಣ ಮಾಡಬೇಕು ಎಂದು ಅಭಿಪ್ರಾಯ ಸಂಗ್ರಹವೂ ಆಯಿತು. ಅನೇಕ ಹೆಸರುಗಳು ಸೂಚಿತವಾದವು. ಉದಾಹರಣೆಗೆ: ‘ಕಡಲಾಚೆಯ ಕನ್ನಡಿಗರು’, ‘ಕನ್ನಡ ಸಂಘ’, ‘ಕನ್ನಡ ಕೂಟ’, ಮುಂತಾಗಿ. ಬಹುಜನರ ಅಭಿಪ್ರಾಯ ‘ಕನ್ನಡ ಕೂಟ’ ಎಂಬುದಾಗಿತ್ತು. ಅದರಂತೆಯೇ ಪ್ರಥಮ ಕನ್ನಡ ಸಂಸ್ಥೆಗೆ “ಪಂಪ ಕನ್ನಡ ಕೂಟ” ಎಂಬ ಹೆಸರು ಬಹುಮತದಿಂದ ಆರಿಸಲ್ಪಟ್ಟಿತು. ಅಮೆರಿಕೆಯಲ್ಲಿ ಕನ್ನಡ ಭಾಷೆ, ಸಾಹಿತ್ಯ, ಕಲೆ, ಜೀವನ ಸಂಸ್ಕೃತಿಯ ಬೆಳವಣಿಗೆಗೆ, ಕನ್ನಡ ಕೂಟ ಆರಂಭವಾದ ದಿನ ಹರಕೆಯಾಗಿ ಬಂದ ರಾಷ್ಟ್ರಕವಿ ಕುವೆಂಪು ಅವರ ಪ್ರಸಾದವಾಣಿ ಹೀಗಿತ್ತು: “ನಿಮ್ಮ ಎಲ್ಲ ಅಭಿವೃದ್ಧಿ ಕಾರ್ಯಗಳು ಮಂಗಳದಿಂದ ಮಂಗಳಕ್ಕೆ ಬೆಳೆಯಲಿ” ಆ ಮಹಾಕವಿಯ ಹರಕೆ “ಪಂಪ ಕನ್ನಡ ಕೂಟ”ಕ್ಕೆ ಸದಾ ಶ್ರೀರಕ್ಷೆಯಾಗಿರಲಿ. |